ಸಾಮಾಜಿಕ ಗುಂಪುಗಳ ಅಧ್ಯಯನವೇ ಸಮಾಜಶಾಸ್ತ್ರ.
ಗುಂಪುಗಳೆಂದರೆ ಜನರ ಸಮೂಹ. ಈ ಜನರು ಪರಸ್ಪರರೊಡನೆ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ತೊಡತುವರು. ಈ
ಕ್ರಿಯೆ-ಪ್ರತಿಕ್ರಿಯೆಗಳ ಸಂಕೀರ್ಣಸ್ವರೂಪವೇ ಅಂತಃಕ್ರಿಯೆ. ಅತ್ಯಂತ ಸರಳವಾಗಿ ಹೇಳಬೇಕೆಂದರೆ,
ಸಮಾಜಶಾಸ್ತ್ರವು ಜನರನ್ನು ಅಧ್ಯಯನ ಮಾಡುವ ಒಂದು ಅಧ್ಯಯನ. ಜನರು ನಿರ್ದಿಷ್ಟ ರೀತಿಯಲ್ಲಿ ಏಕೆ
ನಡೆದುಕೊಳ್ಳುತ್ತಾರೆಂದು ತಿಳಿಯಲು ಸಮಾಜಶಾಸ್ತ್ರಜ್ಞರು ಬಯಸುತ್ತಾರೆ. ಅಲ್ಲದೇ, ಅವರು
ಗುಂಪುಗಳನ್ನು ಏಕೆ ಸೇರುತ್ತಾರೆ, ರೂಪಿಸುತ್ತಾರೆ, ಯಾವ ಕಾರಣಕ್ಕಾಗಿ ಶಾಂತಿಪ್ರಿಯರಾಗಿರುತ್ತಾರೆ
ಅಥವಾ ಯುದ್ಧಗಳನ್ನು ಮಾಡುತ್ತಾರೆ, ಏಕೆ ದೇವರ ಆರಾಧನೆ ಮಾಡುವರು, ವಿವಾಹವಾಗುವರು ಅಥವಾ ಮತದಾನ
ಮಾಡುವರು, ಕ್ರೀಡೆಗಳೇಕೆ ರಾಷ್ತ್ರೀಯತೆಯನ್ನು ಉತ್ತೇಜಿಸುತ್ತದೆ, ತಮ್ಮ ಸಹವಾಸಿಗಳನ್ನೇಕೆ “ನಮ್ಮವರು-ತಮ್ಮವರು”
ಎಂದು ವರ್ಗೀಕರಿಸುತ್ತಾರೆಂಬುದನ್ನು ತಿಳಿಯಲು ಉತ್ಸಾಹ ತೋರುತ್ತಾರೆ. ಜನರು ಪರಸ್ಪರ
ಅಂತಃಕ್ರಿಯೆಯಲ್ಲಿ ತೊಡಗಿದಾಗ ಏನೆಲ್ಲ ಆಗುತ್ತದೆಂಬುದನ್ನು ಅರಿಯಲು ಬಯಸುತ್ತಾರೆ.
ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳ, ಸಂಸ್ಥೆಗಳ ಮತ್ತು ಸಮುದಾಯದ ವೈಜ್ಞಾನಿಕ ಅಧ್ಯಯನ
ಎನ್ನಬಹುದು.
ಸಾಮಾಜಿಕ ಅಂತಃಕ್ರಿಯೆಯು ಗುಂಪುಗಳಲ್ಲಿ ಕಾಣಬರುವುದು.
ಹಾಗಾಗಿ, ಸಮಾಜಶಾಸ್ತ್ರವು ಅಧ್ಯಯನ ಮಾಡುವ ವಿಷಯಗಳೆಂದರೆ:
೧. ಸಾಮಾಜಿಕ ಗುಂಪುಗಳ ಆಂತರಿಕ ಸ್ವರೂಪ ಸಂಘಟನೆಯ
ವಿಧಾನಗಳು
೨. ಈ ಗುಂಪುಗಳ ಸಂಘಟನೆಯು ಯಾವ ಪ್ರಕ್ರಿಯೆಗಳ ಮೂಲಕ
ತನ್ನ ಸ್ವರೂಪವನ್ನು ನಿರ್ವಹಿಸಿಕೊಳ್ಳುತ್ತದೆ ಅಥವ ಬದಲಾವಣೆ ಹೊಂದುತ್ತದೆ, ಹಾಗು
೩. ಗುಂಪುಗಳ ನಡುವಿನ ಸಂಬಂಧ
ಇದೊಂದು ಸಂಕೀರ್ಣ ಆಧ್ಯಯನ ಶಾಸ್ತ್ರವಾಗಿದ್ದು, ಅದನ್ನು
ಸಾಧಿಸಲು ವೈಜ್ಞಾನಿಕ ವಿಧಾನ ಅನುಸರಿಸಬೇಕಾಗಿರುವುದು ಅನಿವಾರ್ಯ. ಆದರೆ, ಸುಸ್ಪಷ್ಟ
ಪರಿಕಲ್ಪನೆಗಳು ಮತ್ತು ನಿರ್ದಿಷ್ಟವಾಗಿ ವ್ಯಾಖ್ಯೆ ಮಾಡಲ್ಪಟ್ಟ ತಾಂತ್ರಿಕ ಶಬ್ದಗಳ ಪ್ರಯೋಗ ಅನಿವಾರ್ಯ.
ವಾಸ್ತವದಲ್ಲಿ, ಗುಂಪು ಎಂಬ ಪದವೇ ಸಮಾಜಶಾಸ್ತ್ರದ ಪರಿಕಲ್ಪನೆಯಾಗಿರುವುದು. ಸಾಮಾನ್ಯ
ಭಾಷೆಯಲ್ಲಿಯೂ ಗುಂಪು ಎಂಬ ಪದ ಬಳಕೆಯಲ್ಲಿದ್ದರೂ ಕೂಡ, ಸಮಾಜಶಾಸ್ತ್ರದಲ್ಲಿ ಆ ಪದದ ಬಳಕೆ
ವಿಶಿಷ್ಟ ಸ್ವರೂಪದ್ದಾಗಿದ್ದು, ಅದನ್ನು ಮುಂದೆ ವಿವರಿಸಲಾಗುತ್ತದೆ.
ಸಾಮಾಜಿಕ ಗುಂಪುಗಳ ಅಧ್ಯಯನದ ಮಹತ್ತ್ವವನ್ನು ಅತಿಯಾಗಿ
ಒತ್ತಿ ಹೇಳಬೇಕಾದ ಅವಶ್ಯಕತೆಯೇನಿಲ್ಲ. ಮಾನವರ ಜೀವನವೆಲ್ಲವೂ ಗುಂಪಿನಲ್ಲಿಯೇ ಕಾಣಬರುವುದು.
ನಾವೆಲ್ಲರೂ ಕುಟುಂಬದಲ್ಲಿ ಹುಟ್ಟುತ್ತೇವೆ ಹಾಗು ನಂತರದ ಜೀವನವೂ ಒಂದಲ್ಲ ಒಂದು ಗುಂಪಿನೊಡನೆ
ಸಂಬಂಧಿತವಾಗಿರುತ್ತದೆ. ವಿವಿಧ ಬಗೆಯ ಗುಂಪುಗಳ ಸದಸ್ಯರಾಗಿ ನಾವು ನಿರಂತರ
ಕಾರ್ಯನಿರ್ವಹಿಸುತ್ತೇವೆ. ಎಲ್ಲ ಬಗೆಯ ಸಾಮಾಜಿಕ ಸಮಸ್ಯೆಗಳು – ಬಾಲಾಪರಾಧ, ಜನಾಂಗೀಯ ಭೇದ, ವಸತಿ
ಸಮಸ್ಯೆ, ಶಿಕ್ಷಣದ ಕೊರತೆ ಇತ್ಯಾದಿಗಳು ಗುಂಪಿನ ಅಸಮರ್ಪಕ ಜೀವನ ವಿಧಾನ ಹಾಗು ಅಂತಃಕ್ರಿಯೆಗೆ
ಸಂಬಂಧಿಸಿದೆ. ಸಾಮಾಜಿಕ ನೀತಿಗಳ ರೂಪಿಸುವಿಕೆಯು
ಸಾಮಾಜಿಕ ಗುಂಪುಗಳ ಬಗೆಗಿನ ಜ್ಞಾನವನ್ನು ಅವಲಂಬಿಸಿದೆ. ಆದರೆ, ಅನೇಕ ಸಂದರ್ಭಗಳಲ್ಲಿ ಈ
ನಿರ್ಣಯಗಳನ್ನು ಅಸ್ಪಷ್ಟ ಜ್ಞಾನ, ಅಸಮರ್ಪಕ ಮಾಹಿತಿ ಹಾಗು ಪೂರ್ವಾಗ್ರಹಗಳಿಂದ ಕೂಡ
ತೆಗೆದುಕೊಳ್ಳಬಹುದು. ಸಾಮಾಜಿಕ ಸಮಸ್ಯೆಗಳ ಬಗೆಹರಿಸುವಿಕೆಗೆ ಉತ್ತಮ ಸಮಾಧಾನಗಳನ್ನು
ಕಂಡುಕೊಳ್ಳಲು, ಪರಿಶೀಲಿಸಲ್ಪಟ್ಟ ಜ್ಞಾನದ ಅವಶ್ಯಕತೆ ಇರುವುದು.
ಮಾನವರ ಅತ್ಯಂತ ಆತ್ಮೀಯವಾದ ನಂಬಿಕೆಗಳು, ಗುರಿಗಳು
ಮತ್ತು ಆದರ್ಶಗಳು ನಾವು ಸದಸ್ಯರಾಗಿರುವಂತಹ ಗುಂಪಿನಿಂದ ನಿರ್ಧರಿಸಲ್ಪಡುತ್ತದೆ. ಸಹಜವಾಗಿಯೇ,
ನಾವೇನಾದರು ಹೊಸ ಗುಂಪಿನ ಸದಸ್ಯರಾಗಲು ಬಯಸಿದರೆ, ಆ ಗುಂಪಿನ ನಂಬಿಕೆಗಳು, ಆದರ್ಶಗಳು,
ಗುರಿಗಳನ್ನು ಒಪ್ಪಿಕೊಳ್ಳಲು ಪ್ರಯತ್ನಪಡುವೆವು. ಹಾಗಾಗಿ ಸಮಾಜಶಾಸ್ತ್ರವು ನಾವು ನಮ್ಮ ಬಗ್ಗೆ
ಹೊಂದಿರುವಂತಹ ಜ್ಞಾನದ ಉತ್ಕರ್ಷಕ್ಕೆ ಕೊಡುಗೆ ನೀಡುವಂತಹುದ್ದಾಗಿರ ಬೇಕು. ಈ ಸಾರ್ವತ್ರಿಕ
ಪ್ರಯೋಜನವಲ್ಲದೇ, ಸಮಾಜದ ರೀತಿ ನೀತಿಗಳ ಕುತೂಹಲ ಹೊಂದಿ, ಪ್ರಶ್ನಿಸಿ, ಉತ್ತರ ಪಡೆಯುವ
ಪ್ರಕ್ರಿಯೆ ಕೂಡ ಅತ್ಯಂತ ಆಸಕ್ತಿಕರವಾಗಿದೆ.
ಇದಲ್ಲದೆ, ಸಮಾಜಶಾಸ್ತ್ರವು ಕೆಲವು ಅತ್ಯಮೂಲ್ಯವಾದ
ಜೀವನ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಸಮಾಜಶಾಸ್ತ್ರೀಯ ಸಿದ್ಧಾಂತದ ಅಧ್ಯಯನವು critical ಚಿಂತನಾಕ್ರಮವನ್ನು ಬೆಳೆಸುತ್ತದೆ. ಸಾಮಾಜಿಕ
ಪ್ರಪಂಚವನ್ನು ವಿಭಿನ್ನ ದೃಷ್ಟಿಕೋಣಗಳಿಂದ ನೋಡುವ ಸಾಮರ್ಥ್ಯವನ್ನು ಸಿದ್ಧಾಂತಗಳು ಒದಗಿಸುವವು.
ಪ್ರಪಂಚದಾದ್ಯಂತ ಹಿಂಸೆ, ದ್ವೇಷ, ಪ್ರಕ್ಷುಬ್ಧತೆಯ ವಾತಾವರಣ ತುಂಬಿರುವಾಗ, ಅದನ್ನು ಅರ್ಥ
ಮಾಡಿಕೊಳ್ಳಲು ಇದು ಸಹಾಯಕವಾಗಿದೆ.
ಎರಡನೆಯದಾಗಿ, ಸಮಾಜಶಾಸ್ತ್ರದ ಅಧ್ಯಯನವು ಸಂವಹನಾ
ಕೌಶಲ್ಯಗಳನ್ನು ಬೆಳೆಸುವುದು. ಸಂವಹನವೆಂದರೆ, ಚಿಂತನೆಗಳನ್ನು ಸ್ಪಷ್ಟವಾಗಿ, ಸಮೂಚಿತವಾಗಿ ಹಾಗು
ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸುವುದು. ವಿವಿಧ ಗುಂಪಿನ ಜನರೊಡನೆ ಸಂವಹನ ನಡೆಸಲು – ಬರಹ ಅಥವ
ಮೌಖಿಕವಾಗಿ, ಅವಶ್ಯಕವಾದ ಬುನಾದಿಯನ್ನು ಸಮಾಜಶಾಸ್ತ್ರದ ಪದವಿ ಒದಗಿಸುತ್ತದೆ.
ಮೂರನೆಯದಾಗಿ, ಅಂತಸ್ಸಂಬಂಧ ಕೌಶಲ್ಯಗಳನ್ನು
ಉತ್ತೇಜಿಸುವುದು. ಆಧುನಿಕ ಜಗತ್ತಿನ ವ್ಯವಹಾರ ವ್ಯಕ್ತಿ-ವ್ಯಕ್ತಿಗಳ ನೆಟ್ ವರ್ಕಿಂಗನ್ನು
ಅವಲಂಬಿಸಿದೆ. ಗ್ರಾಹಕ ಕೇಂದ್ರಿತ ವಾತಾವರಣ ನಿರ್ಮಿತವಾಗಿದೆ. ಹಾಗಾಗಿ ಉದ್ಯೋಗದಾತರು
ಅಂತಸ್ಸಂಬಂಧ ಬೆಳೆಸುವಂತಹ ಕೌಶಲ್ಯಗಳನ್ನು ಹೊಂದಿರುವಂತಹ ಪದವಿಧರರಿಗೆ ಉದ್ಯೋಗ ನೀಡಲು ಬಯಸುತ್ತಾರೆ.
ಸಮಾಜಶಾಸ್ತ್ರದಲ್ಲಿ ತಂಡ ಕಾರ್ಯಗಳಿಗೆ, ನಾಯಕತ್ವದ ಗುಣಗಳ ಅಧ್ಯಯನಕ್ಕೆ ಅವಕಾಶವಿರುವುದರಿಂದ
ಅದರೆ ಪದವಿಧರರು ನವೀನ ಕಾರ್ಯಗಳ ಪ್ರಾರಂಭಿಸುವಿಕೆಯ ಸೂಕ್ಷ್ಮತೆಗಳನ್ನು ಕಲಿಯುವರು.
ಇತರರೊಡನೆ ಹೊಂದಿಕೊಂಡು ಕಾರ್ಯನಿರ್ವಹಿಸುವುದನ್ನು ಕಲಿಯುವರು.
ನಾಲ್ಕನೆಯದಾಗಿ, ಸಮಾಜಶಾಸ್ತ್ರದ ಅಧ್ಯಯನವು ವಿಶ್ಲೇಷಣಾ
ಕೌಶಲಗಳನ್ನು ಬೆಳೆಸುತ್ತವೆ. ಸಮಾಜದ – ಸಾಮಾಜಿಕ ಗುಂಪುಗಳ ಅಧ್ಯಯನವೇ ಸಮಾಜಶಾಸ್ತ್ರವಾದ್ದರಿಂದ,
ಸಮಸ್ಯಾ ಪರಿಹಾರಕ ಸಾಮರ್ಥ್ಯವನ್ನು ಹಾಗು ನಿಖರ ಮತ್ತು ತಾರ್ಕಿಕ ಚಿಂತನೆಯನ್ನು
ಪ್ರೋತ್ಸಾಹಿಸುತ್ತದೆ. ಈ ಕೌಶಲಗಳು ಎಲ್ಲ ಬಗೆಯ ಸನ್ನಿವೇಶಗಳು ಮತ್ತು ಪ್ರಾಜೆಕ್ಟ್ ಗಳನ್ನು
ಪೂರೈಸಲು ಅತ್ಯವಶ್ಯಕ.
ಐದನೆಯದಾಗಿ, ಸಂಖ್ಯಾಶಾಸ್ತ್ರೀಯ ಕೌಶಲದ ಬಗ್ಗೆ ಒತ್ತು
ನೀಡುತ್ತದೆ. ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸುವ ಸಾಮರ್ಥ್ಯ, ಅದರಲ್ಲೂ ಸಂಖ್ಯಾತ್ಮಕ
ಮಾಹಿತಿಯ ವಿಶ್ಲೇಷಣಾ ಕೌಶಲ್ಯವಿರುವವರಿಗೆ, ಬಹು ಬೇಡಿಕೆ ಇದೆ. ಅಲ್ಲದೇ, ವಿಶ್ಲೇಷಣೆಯ
ನಿರ್ಣಯಗಳನ್ನು ಸುಸ್ಪಷ್ಟವಾಗಿ ವರದಿ ಮಾಡುವ ಕಲೆಯನ್ನು ಕೂಡ ಕಲಿಯಬಹುದು.
ಆರನೆಯದಾಗಿ, ಸಮಾಜಶಾಸ್ತ್ರವು ಸಂಸ್ಕೃತಿಗಳ ಬಗ್ಗೆ
ಜ್ಞಾನ ನೀಡುವುದು. ಜಾಗತೀಕರಣಗೊಂಡ ಪ್ರಪಂಚದಲ್ಲಿ ವಿವಿಧ ಸಾಂಸ್ಕೃತಿಕ ಸನ್ನಿವೇಶಗಳನ್ನು
ಅರ್ಥಮಾಡಿಕೊಂಡು ವ್ಯವಹರಿಸುವ ಕೌಶಲ ಅತ್ಯಗತ್ಯ. ಸಮಾಜಶಾಸ್ತ್ರದ ಪದವಿ ಜಾಗತಿಕ ದೃಷ್ಟಿಕೋಣವನ್ನು
ನೀಡುವುದು ಮತ್ತು ಸಾಂಪ್ರದಾಯಿಕ ಸಿದ್ಧಮಾದರಿಗಳ
ಬಗ್ಗೆ ಅರಿವನ್ನುಂಟುಮಾಡುವುದು.
ಏಳನೆಯದಾಗಿ, ನಾಯಕತ್ವದ ಕೌಶಲಗಳು. ಯಾರು ತಮ್ಮ
ವರ್ತನೆಯ ಆಧಾರದಲ್ಲಿ ಇತರರನ್ನು ಮುನ್ನಡೆಸುವ ಗುಣ ಹೊಂದಿರುತ್ತಾರೋ, ಅವರಿಗೆ ಸಾಕಷ್ಟು ಗೌರವ
ಹಾಗು ಉದ್ಯೋಗ ಕ್ಷೇತ್ರದಲ್ಲಿ ಬೇಡಿಕೆಯಿರುವುದು. ಮಾಹಿತಿಯನ್ನು ಹೇಗೆ ಹುಡುಕುವುದು, ಅದರಲ್ಲಿ
ಯಾವುದು ಪ್ರಮುಖವೋ ಅದನ್ನು ಪ್ರತ್ಯೇಕಿಸುವುದು ಮತ್ತು ಅದರ ಆಧಾರದಲ್ಲಿ ಒಪ್ಪಿಕೊಳ್ಳಲೇ
ಬೇಕಾದಂತಹ ವಾದವನ್ನು ಮಂಡಿಸುವ ಕೌಶಲ್ಯ ಸಮಾಜಶಾಸ್ತ್ರದ ಅಧ್ಯಯನದಿಂದ ಸಾಧ್ಯ. ಇದು ಇತರರನ್ನು
ಪ್ರಭಾವಿಸಲು ಹಾಗು ಪ್ರೇರೇಪಿಸಲು ಸಹಾಯಕ.
ಇತ್ತೀಚಿನ ದಿನಗಳ ಸಂಶೋಧನೆಗಳ ಪ್ರಕಾರ, ಜನರು ತಮ್ಮ
ಉದ್ಯೋಗವನ್ನು ಅನೇಕ ಬಾರಿ ಬದಾಲಾಯಿಸುವರು. ಕೇವಲ ಒಂದು ರೀತಿಯ ಉದ್ಯೋಗಕ್ಕಾಗಿ ಏಕೆ ತರಬೇತಿ
ಹೊಂದಬೇಕು? – ಈ ಪ್ರಶ್ನೆ ಇಂದು ಸಾಮಾನ್ಯವಾಗಿದೆ. ಮಾನವ ಸಮಾಜಗಳೆಂದರೇನು? ಅವು ಹೇಗೆ
ರೂಪಿಸಲ್ಪಟ್ಟಿದೆ? ಯಾವ ಕಾರಣಕ್ಕಾಗಿದೆ? ಎಂಬ ಪ್ರಶ್ನೆಗಳನ್ನು ಸಮಾಜಶಾಸ್ತ್ರ
ಉತ್ತರಿಸುವುದರಿಂದ, ಸ್ಪರ್ಧಾತ್ಮಕ ಜಗತ್ತಿನ ಮಂಚೂಣಿಯಲ್ಲಿರಲು ಇದರ ಅಧ್ಯಯನ ಸಹಾಯಕ.
ವೃತ್ತಿಯಿರಬಹುದು ಅಥವಾ ವ್ಯವಹಾರವಿರಬಹುದು, ಸಮಾಜಶಾಸ್ತ್ರ ಅದಕ್ಕೆ ಅಗತ್ಯವಾದ ಬೌದ್ಧಿಕ
ಹಿನ್ನಲೆಯನ್ನು ಒದಗಿಸಿ ಕೊಡುವುದು. ಅಂತಹ ಕೆಲವು ವೃತ್ತಿಗಳೆಂದರೆ –
- ಆಡಳಿತ. ಸಮಾಜಶಾಸ್ತ್ರಜ್ಞರು ತಮ್ಮ ಸಮುದಾಯವನ್ನು ಪುನರ್ರೂಪಿಸಬಲ್ಲರು. ಅದರಲ್ಲೂ ಸಾರ್ವಜನಿಕ ಕ್ಷೇತ್ರದಲ್ಲಿ, ಸರ್ಕಾರೇತರ ಸಂಸ್ಥೆಗಳಲ್ಲಿ ಅವರು ಸಂಶೋಧಕರಾಗಿ ಸಾರ್ವಜನಿಕ್ ನೀತಿ ನಿರೂಪಣೆಯ ವ್ಯಾಖ್ಯಾನಿಸುವಿಕೆಯಲ್ಲಿ ಭಾಗವಹಿಸಬಹುದು.
- ವಾಣಿಜ್ಯ-ವ್ಯವಹಾರ. ಗ್ರಾಹಕರ ಅಭಿರುಚಿಗಳು, ಬದಲಾಗುತ್ತಿರುವ ಒಲವುಗಳ ಸಂಶೋಧನೆಯಲ್ಲಿ ತೊಡಗಬಹುದು.ಆನುಭೋಗಿ ಸಂಸ್ಕೃತಿಯ ಒಟ್ಟು ಸ್ವರೂಪವನ್ನು ಅರ್ಥಮಾಡಿಕೊಳ್ಳಬಹುದು ಹಾಗು ಬಿಸಿನೆಸ ಜನರಿಗೆ ಮಾರ್ಗದರ್ಶನ ನೀಡಬಹುದು.
- ಆರೋಗ್ಯ ಮತ್ತು ಕಲ್ಯಾಣ ಸೇವಗಳು. ರೋಗಿಗಳ ಹಾಗು ಫಲಾನುಭವಿಗಳ ಬಗ್ಗೆ ಸಮರ್ಪಕ ಅರಿವನ್ನು ಹೊಂದಲು ಬಹುಪಾಲು ಆರೋಗ್ಯ ಮತ್ತು ಕಲ್ಯಾಣ ಕಾರ್ಯಕರ್ತರು ಸಮಾಜಶಾಸ್ತ್ರದ ಅಧ್ಯಯನ ಮಾಡುವರು. ಸಮಾಜಶಾಸ್ತ್ರಜ್ಞರು ಸಾಮಾನ್ಯವಾಗಿ ಬಳಸುವಂತಹ pattern analysis techniques – ಮಾದರಿ ವಿಶ್ಲೇಷಣಾ ತಂತ್ರಗಳ ಮೂಲಕ ಸಮುದಾಯದ ಗಂಭೀರ ಅವಶ್ಯಕತೆಗಳನ್ನುಗುರುತಿಸಲು ಸಹಾಯಕವಾಗುತ್ತದೆ.
- ಶಿಕ್ಷಣ. ಸಮಾಜಶಾಸ್ತ್ರೀಯ ದೃಷ್ಟಿಕೋಣ ಹೊಂದಿರುವಂತಹ ಶಿಕ್ಷಕರು, ಮಕ್ಕಳ ಹಿನ್ನಲೆ ಹಾಗು ಅವರ ವರ್ತನೆಗಳ ಕಾರಣಗಳನ್ನು ತಿಳಿಯುವಂತಹ ಶಕ್ತಿ ಪಡೆಯುತ್ತಾರೆ. ಇದು ಅವರು ಶಾಲೆಯಲ್ಲಿ ಎದುರಿಸಬಹುದಾದಂತಹ ಅನೇಕ ಸವಾಲುಗಳನ್ನು ನಿಭಾಯಿಸಲು ಬೇಕಾದ ವಿಶ್ವಾಸ ಕೊಡುತ್ತದೆ.
- ಪತ್ರಿಕೋದ್ಯಮ/ಸಮೂಹಮಾಧ್ಯಮ ಕ್ಷೇತ್ರ. ವೃತ್ತಪತ್ರಿಕೆಗಳು ಹಾಗು ಇತರ ಸಮೂಹ ಮಾಧ್ಯಮಗಳವರು ಜನರನ್ನು ಆಕರ್ಷಿಸುವ ವಿಷಯಗಳನ್ನು ತಿಳಿಯಲು ಸಮಾಜಶಾಸ್ತ್ರಜ್ಞರನ್ನು ನೇಮಕಮಾಡಿಕೊಳ್ಳುತ್ತಾರೆ. ಅದಕ್ಕಿಂತ ಹೆಚ್ಚಾಗಿ, ಯಾವ ಬಗೆಯ ವಿಷಯಗಳನ್ನು ಗಂಭೀರತೆಯಿಂದ ಪ್ರಸ್ತುತ ಪಡಿಸಬೇಕು ಎಂಬುದರಲ್ಲಿ ಸಮಾಜಶಾಸ್ತ್ರಜ್ಞರೊಡನೆ ಪರಾಮರ್ಶನ ಮಾಡುವರು.
- ಸಮಾಜಶಾಸ್ತ್ರಜ್ಞರನ್ನು
ಸಂಶೋಧನಾಕ್ಷೇತ್ರಗಳಲ್ಲಿ, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲೂ ಕೂಡ ನೇಮಕ ಮಾಡಿಕೊಳ್ಳಲಾಗುವುದು.
ಧನ್ಯವಾದಗಳು
ಪ್ರತ್ಯುತ್ತರಅಳಿಸಿ