ವಿಷಯಕ್ಕೆ ಹೋಗಿ

ರಾಡಕ್ಲಿಫ್ ಬ್ರೌನ್ (Radcliffe-Brown)




ಆಲ್ಫ್ರೆಡ್ ರೆಜಿನಾಲ್ಡ್ ರಾಡಕ್ಲಿಫ್-ಬ್ರೌನ್ (Alfred Reginald Radcliffe-Brown) ಇಪ್ಪತ್ತನೆಯ ಶತಮಾನದ ಪ್ರಮುಖ ಸಾಮಾಜಿಕ ಮಾನವಶಾಸ್ತ್ರಜ್ಞರು. ಬ್ರಿಟಿಷ್ ಮೂಲದ ಬ್ರೌನ್ ಅವರು ಫ್ರಾನ್ಸನ ಸೈದ್ಧಾಂತಿಕ ಸಮಾಜಶಾಸ್ತ್ರವನ್ನು ಆಂಗ್ಲರಿಗೆ ಪರಿಚಯ ಮಾಡಿಕೊಟ್ಟಿದ್ದಲ್ಲದೇ, ಕ್ಷೇತ್ರಾಧ್ಯಯನಕ್ಕೆ ಅವಶ್ಯವಿರುವ ಸಮರ್ಪಕ ಪರಿಕಲ್ಪನೆಗಳನ್ನು ಒದಗಿಸಿದರು. ಅನೇಕ್ ವಿಶ್ವವಿದ್ಯಾನಿಲಯಗಳಲ್ಲಿ ಈ ಶಾಸ್ತ್ರದ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದರು.

ಪ್ರಥಮ ಮಹಾಯುದ್ಧಕ್ಕಿಂತ ಮೊದಲೇ, ಬ್ರೌನ್ ಅವರು ಡರ್ಖೀಂ ಅವರ ಪ್ರಭಾವಕ್ಕೆ ಒಳಗಾದರು. ಜನಾಂಗಶಾಸ್ತ್ರದ ಅಧ್ಯಯನಗಳಿಗೆ ಆತನ ಸಿದ್ಧಾಂತವನ್ನು ಹೇಗೆ ಆನ್ವಯಿಸಬಹುದು ಎಂಬುದನ್ನು ಪರಿಶೀಲಿಸುವುದು ಆತನ ಜೀವನದ ಉದ್ದೇಶವಾಯಿತು. 

ಜೀವನ: 
 
ಬರ್ಮಿಂಗಹಾಮಿನ ಸ್ಪಾರ್ಕಬ್ರೂಕ್ ಎಂಬ ಪ್ರದೇಶದಲ್ಲಿ ೧೮೮೧ರಂದು ಬ್ರೌನ್ ಜನಿಸಿದರು. ಕೇವಲ ಐದುವರ್ಷದ ಬಾಲಕನಾಗಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡ ಬ್ರೌನ್ ತಾಯಿಯ ಆರೈಕೆಯಲ್ಲಿ ಬೆಳೆದರು. ಅಣ್ಣನ ಪ್ರೋತ್ಸಾಹದಿಂದ, ಮಧ್ಯದಲ್ಲಿ ಬಿಟ್ಟ ವಿದ್ಯಾಭ್ಯಾಸವನ್ನು ಮುಂದುವರಿಸಿದ ಅವರು, ಬರ್ಮಿಂಗಹಾಮ್ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಪೂರ್ವ ಕೋರ್ಸ್ ಮಾಡಿದರು. ೧೯೦೨ರಲ್ಲಿ ಕೇಂಬಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದ ಬ್ರೌನ್, ಜೀವಶಾಸ್ತ್ರವನ್ನು ಅಧ್ಯಯನ ಮಾಡಬಯಸಿದರು; ಆದರೆ, ಅವರ ಟ್ಯೂಟರ್ ಅದಕ್ಕೆ ಒಪ್ಪದೇ, ಅವರು Mental and Moral Sciences (ಮನಶ್ಶಾಸ್ತ್ರೀಯ ಮತ್ತು ನೈತಿಕ ವಿಜ್ಞಾನಗಳು) ಕೋರ್ಸ್ ಸೇರಬೇಕಾಯಿತು. 

ಕೇಂಬ್ರಿಡ್ಜನಲ್ಲಿ ಅವರು ರಿವರ್ಸ್ ಹಾಗು ಮೈಯರ್ಸ್ ಅವರ ವಿದ್ಯಾರ್ಥಿಯಾಗಿದ್ದರು. ಇಬ್ಬರೂ medical psychologistsಗಳಾಗಿದ್ದರು ಹಾಗು ಕೇಂಬ್ರಿಡ್ಜಿನ ಪ್ರಮುಖ ಕ್ಷೇತ್ರಾಧ್ಯಯನ ಸಂಶೋಧನೆಯಾದ Torres expeditionನ ರೂವಾರಿಗಳಾಗಿದ್ದರು. ಈ ಕೋರ್ಸನಲ್ಲಿ ಮನಃಶಾಸ್ತ್ರ ಹಾಗು ತತ್ತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿದರು. ಅಲ್ಲದೇ philosophy of science (ವಿಜ್ಞಾನದ ತತ್ತ್ವಶಾಸ್ತ್ರ) ಅನ್ನು, ನೋಬೆಲ್ ಪಾರಿತೊಷಕ ವಿಜೇತರಾದ ಆಲ್ಫ್ರೆಡ್ ನಾರ್ಥ್ ವೈಟ್ ಹೆಡ್ ಅವರ ಬಳಿ ಅಧ್ಯಯನ ಮಾಡಿದರು. ಪ್ರಥಮ ಸ್ಥಾನ ಗಳಿಸಿದ ಬ್ರೌನ್, ರಿವರ್ಸ್ ಅವರ ಮೊತ್ತಮೊದಲ ಮಾನವಶಾಸ್ತ್ರ ವಿದ್ಯಾರ್ಥಿಯಾಗಿ ೧೯೦೪ರಲ್ಲಿ ಸೇರಿಕೊಂಡರು. ಅಂದಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಶೈಕ್ಷಣಿಕ ವಾತಾವರಣದಲ್ಲಿ ಹೊಸ ಅಲೆಗಳನ್ನು ಎಬ್ಬಿಸಿತ್ತು. ವಿವಿಧ ಕ್ಷೇತ್ರಗಳ ದಿಗ್ಗಜರು ಅದನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ಹಾಗಾಗಿ, ಬ್ರೌನ್ ಅತ್ಯಂತ ಜೀವಂತ ಓದುವ, ಪ್ರಶ್ನಿಸುವ ಪರಿಸರದಲ್ಲಿ ತಮ್ಮ ಸಂಶೋಧನಾ ಜೀವನ ಪ್ರಾರಂಭಿಸಿದರು.

೧೯೦೬-೦೮ರ ಅವಧಿಯಲ್ಲಿ ಅಂಡಮಾನ್ ದ್ವೀಪವಾಸಿಗಳ ಬಗ್ಗೆ ಕ್ಷೇತ್ರಾಧ್ಯಯನ ಮಾಡಿದ ಬ್ರೌನ್ ಅವರಿಕೆ ರಿವರ್ಸ್ ಮತ್ತು ಹ್ಯಾಡನ್ ಅವರು ಮಾರ್ಗದರ್ಶಕರಾಗಿದ್ದರು. ಇದು ಪ್ರಸರಣಾವಾದದಿಂದ ಪ್ರಭಾವಿತವಾಗಿತ್ತು. ಇದರ ವರದಿ ಅವರಿಗೊಂದು ಫೆಲೋಶಿಪ್ ಒದಗಿಸಿದ್ದರಿಂದಾಗಿ, ೧೯೧೪ರವರೆಗೂ, ಟ್ರಿನಿಟಿಯಲ್ಲಿ ಕೆಲಸಮಾಡಿದರು. ಈ ಮಧ್ಯೆ, London School of Economics (LSE)ನಲ್ಲಿ ಕೂಡ ಉಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದರು.

ಇದೇ ಅವಧಿಯಲ್ಲಿ ಎಮಿಲಿ ಡರ್ಖೀಂ ಅವರ ಚಿಂತನೆ, ಬ್ರಿಟನ್ನಿನ ವಿದ್ವಾಂಸರನ್ನು ಆಕರ್ಷಿಸಲಾರಂಬಿಸಿತು. ಅವರು ಮತ-ಧರ್ಮದ ಬಗ್ಗೆ ಮಂಡಿಸಿದ ಚಿಂತನೆ ಸಾಕಷ್ಟು ಪ್ರಭಾವ ಬೀರಿದ್ದನ್ನು ನಾವು ಕಾಣಬಹುದು. ಬ್ರೌನ್ ಅವರು ೧೯೦೯-೧೦ರ ಅವಧಿಯಲ್ಲಿ LSE ಮತ್ತು ಕೇಂಬ್ರಿಡ್ಜಗಳಲ್ಲಿ ಡರ್ಖೀಂ ಅವರ ಸಿದ್ಧಾಂತವನ್ನಾಧರಿಸಿದ ಉಪನ್ಯಾಸಗಳನ್ನು ನೀಡಿದರು ಹಾಗು ಅವರ ಅಂದಿನ ಚಿಂತನಾಲಹರಿ, ಅವರ ಜೀವನದುದ್ದಕ್ಕೂ ಮುಂದುವರಿದುಕೊಂಡು ಹೋಗಿದ್ದನ್ನು ನಾವು ಕಾಣಬಹುದು. ರಿವರ್ಸ್ ಅವರ ಪ್ರಸರಣಾವಾದದಿಂದ ಹೊರಬಂದ ಬ್ರೌನ್ ಅವರ ಬದಲಾವಣೆ ಸಂಪೂರ್ಣವಾಗಿತ್ತೆಂದು ಹೇಳಬಹುದು. ಈ ಬದಲಾವಣೆ ವೈಜ್ಞಾನಿಕ ವಿಧಾನ, ಸಾಮಾಜಿಕ ಜೀವನವು ಪ್ರಕ್ರಮದಿಂದ ಕೂಡಿದ್ದು ಅದನ್ನು ತರ್ಕಬದ್ಧವಾಗಿ ಅಧ್ಯಯನ ಮಾಡಬಹುದೆಂಬ ನಂಬಿಕೆ, ವೈಯಕ್ತಿಕ ಭಾವಾವೇಶಗಳಿಂದ ದೂರ ಉಳಿದು ಸಂಶೋಧನೆ ಮಾಡಬಹುದೆಂಬ ಆಶಯಗಳನ್ನು ಹುಟ್ಟುಹಾಕಿತ್ತು.

ಬಂಧುತ್ವ ಬ್ರೌನ್ ಅವರ ಸಂಶೋಧನಾ ಕ್ಷೇತ್ರ. ವಿಶಿಷ್ಟ ಕೊಡುಗೆಯನ್ನು ಅವರು ಈ ಕ್ಷೇತ್ರಕ್ಕೆ ನೀಡಿದ್ದರೆ. ಅವರ ಎಲ್ಲ ಅಧ್ಯಯನಗಳಂತೆ, ಇಲ್ಲಿಯೂ ಕೂಡ ಅವರು, ಬಂಧುತ್ವದ ಪರಿಕಲ್ಪನೆಗಳನ್ನು ವ್ಯಾಖ್ಯೆ ಮಾಡಿ, ನಂತರದಲ್ಲಿ ತಮ್ಮ ವಿಶ್ಲೇಷಣೆಯನ್ನು ಮಂಡಿಸಿರುವರು. 

ಅವರು ಬಂಧುತ್ವ ವ್ಯವಸ್ಥೆಯನ್ನು ಮತ್ತು ವಿವಾಹವನ್ನು ಕೆಳಗಿನಂತೆ ವರ್ಣಿಸುತ್ತಾರೆ:

·       ಪರಸ್ಪರ ಸಂಬಂಧಿತವಾದ ಆಚರಣೆಗಳ ಗುಂಪು
·       ಕೆಲವು ಜೈವಿಕ ಸಂಬಂಧಗಳಿಗೆ ಸಾಮಾಜಿಕ ಮಾನ್ಯತೆ ನೀಡುವ ಉದ್ದೇಶದಿಂದ ಪ್ರೇರಿತವಾಗಿದೆ

ಬಂಧುತ್ವವನ್ನು ವ್ಯವಸ್ಥೆಯೆಂದು ಕರೆಯುವುದರಿಂದ, ಬ್ರೌನ್ ಅವರು ಅದರ ಘಟಕಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ:
  •  ಬಂಧುತ್ವ ಸೂಚಕ ಪದಗಳು
  •  ಬಂಧುಗಳ ನಡುವಿರುವಂತಹ ವಾಸ್ತವ ಸಂಬಂಧಗಳು
  •  ನಿರ್ದಿಷ್ಟ ಬಂಧುತ್ವ ಪಾತ್ರಗಳಿಗೆ ಸಂಬಂಧಿಸಿದ ಹಕ್ಕುಗಳು, ಬಾಧ್ಯಸ್ಥಿಕೆಗಳು ಮತ್ತು ಆಚರಣೆಗಳು
  •  ಹುಟ್ಟು ಮತ್ತು ಪಿತೃಪೂಜೆಗೆ ಸಂಬಂಧಿಸಿದಂತಹ ನಂಬಿಕೆಗಳು
ಈ ಹಿನ್ನಲೆಯಲ್ಲಿ, ಬ್ರೌನ್ ಅವರು ಬಂಧುತ್ವ ವ್ಯವಸ್ಥೆಯ ಎರಡು ಆಯಾಮಗಳನ್ನು ಕಡೆ ಗಮನ ಹರಿಸಿದರು:
  1. ಬಂಧುಗಳ ನಡುವಿನ ಸಂಬಂಧಗಳನ್ನು ನಿರ್ದೇಶಿಸುವ ಆಚರಣೆಗಳು
  2. ಬಂಧುಗಳನ್ನು ಸಂಬೋಧಿಸಲು ಬಳಸುವಂತಹ ಪದಗಳ ಬಳಕೆ
ಅಕ್ಷರಪೂರ್ವ ಸಮಾಜಗಳ ಬಗೆಗಿನ ಅಧ್ಯಯನಗಳ ಆಧಾರದಲ್ಲಿ ಅವರು ಸಾಮಾಜಿಕ ರಚನೆಯ ಅಧ್ಯಯನವೆಂದರೆ, ಬಂಧುತ್ವ ವ್ಯವಸ್ಥೆಯ ಅಧ್ಯಯನವೇ ಎಂಬ ನಿರ್ಣಯಕ್ಕೆ ಬರುತ್ತಾರೆ. ಉದಾಹರಣೆಗೆ, ಅಂಡಮಾನ್ ದ್ವೀಪವಾಸಿಗಳು ಅಥವಾ ಆಸ್ಟ್ರೇಲಿಯಾದ ಮೂಲನಿವಾಸಿಗಳ ಸಮಾಜಗಳ ಸಂಘಟನೆಯನ್ನು ಅವಲೋಕಿಸಿದರೆ,
  • ಅದು ಬಂಧುತ್ವ ಮತ್ತು ವಾಸಸ್ಥಳದ ನಿಯಮಗಳನ್ನು ಆಧರಿಸಿರುವುದು, ಹಾಗು
  • ವಾಸಸ್ಥಳದ ನಿಯಮಗಳು ಬಂಧುತ್ವವನ್ನೇ ಆಧರಿಸಿರುವುದು ಕಂಡುಬರುತ್ತದೆ
ಈ ಹಿನ್ನಲೆಯಲ್ಲಿ, ವೆಸ್ಟರ್ಮಾಕ್ ಅವರನ್ನು ಅನುಸರಿಸಿ, ಬಂಧುತ್ವ ವ್ಯವಸ್ಥೆಯ ಕೇಂದ್ರವು ಕುಟುಂಬವೆಂದು ಬ್ರೌನ್ ಅಭಿಪ್ರಾಯ ಪಡುತ್ತಾರೆ. 

ಆದರೆ, ಕುಟುಂಬದ ಹೊರಗಿನ ಬಂಧುಗಳ ಬಗೆಗಿನ ಅಧ್ಯಯನವು ಬೇರೆ-ಬೇರೆ ಸ್ವರೂಪ ಪಡೆಯಬಹುದು. ವಿಶಾಲವಾಗಿ ನೋಡಿದಾಗ, ಎರಡು ಪ್ರಮುಖ ದಾರಿಗಳನ್ನು ಗುರುತಿಸಬಹುದು:
  • Classificatory kinship systems (ವರ್ಗೀಕರಣಾಧಾರಿತ ಬಂಧುತ್ವ ವ್ಯವಸ್ಥೆ)
  • ಎಸ್ಕಿಮೋಗಳು ಮತ್ತು ಆಧುನಿಕ ಯುರೋಪಿಯನ್ನರಂತೆ, ಕುಟುಂಬದ ಸದಸ್ಯರುಗಳು ಮತ್ತು ಸಂಬಂಧಿಕರನ್ನು ಸ್ಪಷ್ಟವಾಗಿ ಬೇರ್ಪಡಿಸುವುದು.
ಮಾನವಶಾಸ್ತ್ರಜ್ಞರು, ಸಹಜವಾಗಿಯೇ ಮೊದಲ್ ಬಗೆಯ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. ಮಾರ್ಗಾನ್ ಅವರ ಹಾದಿಯನ್ನು ಹಿಡಿದು, ಬ್ರೌನ್ ಕೂಡ ಬಂಧುತ್ವ ವಯ್ವಸ್ಥೆಯಲ್ಲಿ ಕಾಣಬರುವ ಅತ್ಯಂತ ಶ್ರೀಮಂತ ಪದಗಳನ್ನು ಹೊಂದಿದ ವರ್ಗೀಕರಣದ ಬಗ್ಗೆ ಗಮನ ಹರಿಸಿದ್ದಾರೆ. ಏಕೆಂದರೆ, ಯುರೋಪಿಯನ್ನರಲ್ಲಿ ಸಿಸ್ಟರ್ ಎಂಬ ಪದವನ್ನು ಸಹೋದರಿಗೆ ಬಳಸಲಾಗುತ್ತದೆ. ಈ ಪದವು ಸಂದರ್ಭಾನುಸಾರವಾಗಿ “ಹಿರಿಯ” ಅಥವಾ “ಕಿರಿಯ” ಎಂಬ ವಿಶೇಷಣಗಳ ಬಳಕೆಯನ್ನಾಧರಿಸಿ ಸರಿಯಾದ ಅರ್ಥವನ್ನು ನೀಡುವುದು. ಆದರೆ, ಭಾರತದಂತಹ ದೇಶದಲ್ಲಿ ಕಾಣಬರುವ ಅಕ್ಕ, ತಂಗಿ ಎಂಬ ಪದಗಳು ನಿರ್ದಿಷ್ಟ ಸಂಬಂಧಸೂಚಕ ಪದಗಳಾಗಿರುವವು. ಇದೇ ಬಗೆಯಲ್ಲಿ ಆಂಟ್ ಮತ್ತು ಅಂಕಲ್ ಪದಗಳನ್ನೂ ಅರ್ಥ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಅವರು joking relationships - JR (ಹಾಸ್ಯಮಯ ಸಂಬಂಧಗಳನ್ನು) ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಹಾಸ್ಯಮಯ ಸಂಬಂಧಗಳು ಆಫ್ರಿಕಾದ ಬುಡಕಟ್ಟು ಜನರಲ್ಲಿ ಕಾಣಬರುವಂತಹ ಒಂದು ವಿಚಿತ್ರ ಆಚರಣೆಗಳ ಸಮೂಹ. ಈ ವಿಚಿತ್ರ ಆಚರಣೆಗಳನ್ನು ಒಟ್ಟುಗೂಡಿಸಿ ಗುರುತಿಸಲು, ಮಾನವಶಾಸ್ತ್ರಜ್ಞರು joking relationships ಎಂಬ ಪರಿಕಲ್ಪನೆಯನ್ನು ಬಳಸಿದ್ದಾರೆ.

ಜೋಕಿಂಗ್ ರಿಲೇಶನಶಿಪ್ ಮುಖ್ಯವಾಗಿ – 

  • ಆಹಾರ ಮತ್ತು ಲೈಂಗಿಕತೆಗೆ ಸಂಬಂಧಿಸಿದಂತಹ ಮೂಲಭೂತ ಸಂಪ್ರದಾಯಗಳ ಉಲ್ಲಂಘನೆಯನ್ನು, ಮತ್ತು
  • ಇನ್ನಿತ ಸಂದರ್ಭಗಳಲ್ಲಿ ಸಹಿಸಿಕೊಳ್ಳಲಾಗದಂತಹ ಬೈಗುಳಗಳ ಬಳಕೆಯನ್ನು ಒಳಗೊಂಡಿದೆ.
ಈ ಬಗೆಯ ವರ್ತನೆಗಳು ವ್ಯಕ್ತಿ-ವ್ಯಕ್ತಿಗಳ ನಡುವೆ ಮತ್ತು ಬ್ರೌನ್ ಅವರು ಗುರುತಿಸಿದಂತೆ, ಗುಂಪುಗಳ ನಡುವೆ ಕೂಡ ಪ್ರಚಲಿತವಾಗಿತ್ತು.

ಆಫ್ರಿಕಾದ ಥೋಂಗಾ ಜನರ ಗುಂಪಿನಲ್ಲಿ ಕಾಣಬರುವಂತಹ ಈ ಸಂಪ್ರದಾಯವನ್ನು ಜುನಾಡ್ ಅವರು ಹೀಗೆ ವಿವರಿಸಿದ್ದಾರೆ. ಸೋದರ ಅಳಿಯನು ತನ್ನ ತಾಯಿಯ ಸಹೋದರನ ಮನೆಗೆ ಹೋದಾಗ (ಅಂದರೆ, ಸೋದರಮಾವನ ಮನೆ), ಆತನ ಹೆಂಡತಿಯರು – ನೋಡು ನಿನ್ನ ಮಾವ ಆ ಜಾಗದಲ್ಲಿ ವಿಶಿಷ್ಟ ತಿಂಡಿ ತಿನಿಸುಗಳನ್ನು ಇಟ್ಟುಕೊಂಡಿದ್ದಾನೆ, ಹೋಗೆ ತಿನ್ನೆಂದು ಹೇಳಬಹುದಿ. ಆಗ, ಸೋದರಳಿಯನು ತನ್ನ ಸ್ನೇಹಿತರೊಡಗೂಡಿ ಮಾವನಿಗೆ ಮೀಸಲಿಟ್ಟಿದ್ದ ಆಹಾರವನ್ನೆಲ್ಲ ತಿಂದು ಪೂರೈಸಬಹುದು. ಸೋದರಮಾವನು ಮನೆಗೆ ಹಿಂದಿರುಗಿದ ಮೇಲೆ, ತನಗೆ ವಿಶೇಷವಾಗಿ ಮೀಸಲಿಟ್ಟಿದ್ದ ಆಹಾರ ಇಲ್ಲದಿದ್ದನ್ನು ಕಂಡು, ಕೋಪದಿಂದ ಕೆಂಡಾಮಂಡಲನಾಗುತ್ತಾನೆ. ಆದರೆ, ಈ ಕೆಲಸವು ತನ್ನ ಸೋದರಳಿಯನಿಂದ ಮಾಡಲ್ಪಟ್ಟಿದೆಯೆಂದು ತಿಳಿದು ಬಂದ ನಂತರ ಆತ ಶಾಂತನಾಗುವಷ್ಟೆ ಅಲ್ಲ, ಅವನನ್ನು ಕರೆದು ಹೆಚ್ಚು ಆರೈಕೆ ಮಾಡಬಹುದು. ಕೆಲವೊಮ್ಮೆ, ಸೋದರಳಿಯ ಬಂದಾಗ, ಸೋದರಮಾವನು ತನ್ನ ಮನೆಯಲ್ಲಿಯೇ ಇರಬಹುದು. ಆಗ, ತನ್ನ ಹೆಂಡತಿಯರಲ್ಲಿ ಒಬ್ಬರನ್ನು ತೋರಿಸಿ, ಇವಳು ನಿನ್ನ ಹೆಂಡತಿ. ಹೋಗು ಅವಳು ನಿನ್ನ ಉಪಚಾರ ಮಾಡುತ್ತಾಳೆಂದು ಹೇಳಬಹುದು. ಆಕೆ ಕೂಡ, ಇದನ್ನು ಸಂತೋಷದಿಂದ ಒಪ್ಪಿಕೊಂಡು, ಆ ಆಟವನ್ನು ಮುಂದುವರಿಸಿ, ಒಳ್ಳೆಯ ಊಟವನ್ನು ತಯಾರಿಸಿ ಅವನಿಗೆ ನೀಡಬಹುದು. ಸೋದರಳಿಯನೂ ಕೂಡ, ನೀನು ಯಾವಾಗ ಸಾಯುತ್ತೀಯ, ಅವಳನ್ನು ನಾನು ಕರೆದುಕೊಂಡು ಹೋಗುತ್ತೇನೆ ಎಂದರೆ, ಸೋದರಮಾವನು, ಅದನ್ನು ಹಾಸ್ಯದಿಂದ ಸ್ವೀಕರಿಸುತ್ತಾನೆ. ಈ ರೀತಿಯ ಹಾಸ್ಯಮಯ ಸಂಬಂಧವನ್ನು joking relationship ಎಂದು ಕರೆಯಲಾಗಿದೆ.

ಜುನಾಡ್ ಹಾಗು ಇತರರು ಈ ಬಗೆಯ ವಿಚಿತ್ರ ವರ್ತನೆಯನ್ನು ಚಾರಿತ್ರಿಕೆ ಪೂರ್ವ ಸಮಾಜದ ಪಳೆಯುಳಿಕೆ ಎಂದು ವಿವರಿಸುವ ಪ್ರಯತ್ನ ಮಾಡಿದ್ದರು. ಪಿತೃಪ್ರಧಾನ ವ್ಯವಸ್ಥೆಯನ್ನು ಅನುಸರಿಸುವ ಥೋಂಗಾ ಸಮಾಜದಲ್ಲಿ ಕಾಣಬರುವ ಸೋದರಮಾವ – ಸೋದರಳಿಯನ ಹಾಸ್ಯಮಯ ಸಂಬಂಧವನ್ನು ಎಂದೋ ಆಚರಣೆಯಲ್ಲಿ ಇದ್ದಿರಬಹುದಾದ ಮಾತೃಪ್ರಧಾನ ವ್ಯವಸ್ಥೆಯ ಪಳೆಯುಳಿಕೆ ಎಂದು ವಾದಿಸುತ್ತಾರೆ. ಬ್ರೌನ್ ಈ ಬಗೆಯ ಪ್ರಯತ್ನಗಳನ್ನು ಚಾರಿತ್ರಿಕ ಊಹಾಪೋಹ ಎಂದು ತಳ್ಳಿಹಾಕಿದ್ದಾರೆ. ಬದಲಿಗೆ, ಈ ಆಚರಣೆಯ ಹಿಂದಿನ ಉದ್ದೇಶವನ್ನು ಪ್ರಸ್ತುತ ಸನ್ನಿವೇಶದಲ್ಲಿ ಹುಡುಕಬೇಕು ಎನ್ನುತ್ತಾರೆ. 

ಪ್ರಾರಂಭದಲ್ಲಿ, ಮಲಿನೋವಸ್ಕಿ ಹಾಗು ಇತರರಂತೆ, ಹಾಸ್ಯಮಯ ಸಂಬಂಧಾಚರಣೆಯು ಸಂವೇದನೆ/ಭಾವುಕತೆಯ ವಿಸ್ತರಣೆ ಎಂದು ಬ್ರೌನ್ ಕೂಡ ವಾದಿಸಿದರು. Extension of sentiment ವಾದವೆಂದು ಕರೆಯಲಾಗಿದೆ. ಈ ಚಿಂತನೆಯ ಪ್ರಕಾರ, ವ್ಯಕ್ತಿಯು ತಾಯಿ ಮತ್ತು ತಂದೆಯಿಂದ ಪೋಷಣೆಗೆ ಒಳಪಡುತ್ತಾರೆ. ತಂದೆಯಿಂದ ಶಿಸ್ತಿಗೆ, ನಿಯಂತ್ರಣಕ್ಕೆ ಒಳಪಟ್ಟರೆ, ತಾಯಿಯಿಂದ ಮಮತೆ ಮತ್ತು ಪ್ರೀತಿಯನ್ನು ಪಡೆಯುವನು. ಅಂದರೆ, ಬೇರೆ-ಬೇರೆ ಬಗೆಯ ಸಂವೇದನೆಗಳಿಗೆ ಒಳಪಟ್ಟಿರುತ್ತಾನೆ. ಈ ಸಂವೇದನೆಯನ್ನು ಆತ ತನ್ನ ತಂದೆಯ ಸಂಬಂಧಿಕರಿಗೂ ಹಾಗು ತಾಯಿಯ ಸಂಬಂಧಿಕರಿಗೂ ವಿಸ್ತರಿಸುವುದು ಸರ್ವೇಸಾಮಾನ್ಯ. ಹಾಗಾಗಿ, ತಾಯಿಯ ಸಹೋದರ ಕೂಡ ತಾಯಿಯಂತೆ ಮಮತಾಮಯಿಯಾಗುವನು. ಥೋಂಗಾ ಜನರು, ತಾಯಿಯ ಸಹೋದರನನ್ನು – ಪುರುಷ ತಾಯಿ, ಎಂಬರ್ಥ ಬರುವ ಪದದಿಂದ ಸಂಬೋಧಿಸುವರು. (ಮತ್ತೆ ಕೆಲವು ಆಫ್ರಿಕನ್ ಗುಂಪುಗಳಲ್ಲಿ, ಇದಕ್ಕೆ ಪರ್ಯಾಯವಾಗಿ, ತಂದೆಯ ಸಹೋದರಿ – ಸ್ತ್ರೀ ತಂದೆ ಎಂಬರ್ಥ ರುವ ಪದದಿಂದ ಕರೆಯಲ್ಪಡುತ್ತಾಳೆ). ಹಾಗೆಯೇ, ತಾಯಿಯ ತಂದೆ ತಾಳ್ಮೆ ಮತ್ತು ಸ್ವಾತಂತ್ರ್ಯ ನೀಡುವ ವ್ಯಕ್ತಿ ಎಂದು ಅರ್ಥಮಾಡಿಕೊಳ್ಳಲ್ಪಡುತ್ತಾನೆ. ಮುಂದುವರೆದು, ತಾಯಿಯ ಪೂರ್ವಜರೂ ಕೂಡ ಕರುಣಾಮಯಿಗಳು ಎಂದು ಪರಿಗಣಿಸಲ್ಪಡುವರು. 

ಈ ಸಂವೇದನಾ ವಿಸ್ತರಣೆಯ ಸಿದ್ಧಾಂತ ಅಚ್ಚುಕಟ್ಟೆಂದು ಕಂಡು ಬಂದರೂ ಕೂಡ, ಮೇಯರ ಫೋರ್ಟ್ಸ್ ಮುಂತಾದವರು ಗುರುತಿಸುವಂತೆ, ಸೋದರಮಾವನು ಸೋದರಳಿಯನ ಚೇಷ್ಟೆಗಳನ್ನು ಏಕೆ ತಾಳ್ಮೆಯಿಂದ ಸಹಿಸಿಕೊಳ್ಳಬೇಕೆಂಬುದನ್ನು ಇದು ಸಮರ್ಪಕವಾಗಿ ವಿವರಿಸುವುದಿಲ್ಲ. ಬ್ರೌನ್ ಕೂಡ ಈ ಸಮಸ್ಯೆಯನ್ನು ಎದುರಿಸಿದರು. ಡರ್ಖೀಂನ ಪ್ರಭಾವಕ್ಕೆ ಒಳಗಾಗಿದ್ದರಿಂದ, ಆತನ ಸಮಾಜಶಾಸ್ತ್ರೀಯ ವಿಧಾನವನ್ನು ಬಳಸಿದರು. ಅದರಂತೆ, ಹಾಸ್ಯಮಯ ಸಂಬಂಧವೆಂಬ ಸಾಮಾಜಿಕ ಸತ್ಯಸಂಗತಿಯನ್ನು ಸಾಮಾಜಿಕ ಸಂಬಂಧಗಳ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಬಂಧುತ್ವವೆಂಬ  ಮತ್ತೊಂದು ಸಾಮಾಜಿಕ ಸತ್ಯಸಂಗತಿಯ ಮೂಲಕ ವಿವರಿಸುವ ಪ್ರಯತ್ನ ಮಾಡಿದರು.
ಸಾಮಾಜಿಕ ಸಂಬಂಧಗಳು ಎರಡು ಬಗೆಯಾದಾಗಿರುತ್ತವೆ:
  •  ಒಂದೇ ಗುಂಪಿನ ಸದಸ್ಯರ ನಡುವಿನ ಸಂಬಂಧಗಳು
  • ಬೇರೆ-ಬೇರೆ ಗುಂಪುಗಳ ಸದಸ್ಯರುಗಳ ನಡುವಿನ ಸಂಬಂಧಗಳು

ಸಹಜವಾಗಿಯೇ, ಮಾನವ ಶಾಸ್ತ್ರಜ್ಞರು ಎರಡನೆಯ ಬಗೆಯ ಸಂಬಂಧಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಹಾಗು ಇದರಲ್ಲಿನ ಪ್ರಭೇದಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ, (ಅ) ಒಂದೇ ರಾಜಕೀಯ ಸಮುದಾಯದ ಸಾಮಾನ್ಯ ಸದಸ್ಯತ್ವ (ಉದಾ. ಒಂದೇ ರಾಷ್ಟ್ರದ ನಾಗರಿಕರು); (ಆ) ಒಪ್ಪಂದ ಸ್ವರೂಪದ ಸಂಬಂಧಗಳು (ವಾಣಿಜ್ಯ-ವ್ಯವಹಾರದಲ್ಲಿ); (ಇ) ಮೈತ್ರಿ ಅಥವಾ ಒಡನಾಟದಿಂದ ರೂಪಿತವಾಗುವಂತಹ ಸಂಬಂಧಗಳು (ಸ್ನೇಹಿತರು ಮತ್ತು ಸಂಘಟನಾತ್ಮಕ ಸಂಬಂಧಗಳು); (ಈ) ಕೌಟುಂಬಿಕ ಸಂಬಂಧಗಳು
ಬ್ರೌನ್ ಅವರು ಸಮಾಜಶಾಸ್ತ್ರದ ಅಧ್ಯಯನವನ್ನು ಕುಟುಂಬ-ಬಂಧುತ್ವದ ಅಧ್ಯಯನ ಎಂದು ವ್ಯಾಖ್ಯೆ ಮಾಡುವುದರಿಂದ, ಕೌಟುಂಬಿಕ ಸಂಬಂಧಗಳ ನಾಲ್ಕು ಪ್ರಭೇದಗಳನ್ನು ಗುರುತಿಸುತ್ತಾರೆ. ಅವುಗಳೆಂದರೆ, 

  • ವೈವಾಹಿಕ ಸಂಬಂಧ
  • ವಸ್ತು-ಸೇವೆಗಳ ವಿನಿಮಯ ಆಧಾರಿತ ಸಂಬಂಧಗಳು
  • ರಕ್ತ ಸಂಬಂಧಗಳು
  • ಹಾಸ್ಯಮಯ ಸಂಬಂಧಗಳು
ಹಾಗಾಗಿ, ಹಾಸ್ಯಮಯ ಸಂಬಂಧಗಳು ಸಾಮಾಜಿಕವಾಗಿ ಬೇರ್ಪಡಿಸಲ್ಪಟ್ಟ ಗುಂಪುಗಳ ನಡುವೆ ಸಾಧ್ಯವಾಗಬಹುದಾದ ಸಂಬಂಧಗಳ ಪೈಕಿ ಸೀಮಿತ ಸ್ವರೂಪದ ಒಂದು ಸಂಬಂಧ ಮಾತ್ರ ಎಂಬುದನ್ನು ಬ್ರೌನ್ ಸ್ಪಷ್ಟವಾಗಿ ಗುರುತಿಸುತ್ತಾರೆ. ಕೌಟುಂಬಿಕ ಸಂಬಂಧಗಳಲ್ಲಿ ಹಾಸ್ಯಮಯ ಸಂಬಂಧವೊಂದೇ ಪ್ರತ್ಯೇಕವಾಗಿ ಕಾಣಬಹುದು ಅಥವಾ ಇತರ ಬಗೆಯ ಸಂಬಂಧಗಳ ಜೊತೆಯಲ್ಲಿಯೂ ಕಂಡುಬರಬಹುದು.
 ಈ ಬಗೆಯ ಸಂಬಂಧಗಳಿಗೆ ಹಾಸ್ಯಮಯ (joking) ಸಂಬಂಧ ಎನ್ನಲು ಕಾರಣವೇನು?
ಇದನ್ನು ಅರ್ಥಮಾಡಿಕೊಳ್ಳಬೇಕೆಂದರೆ, ನಾವು ಬಂಧುತ್ವ ಸಂಬಂಧಿತ ಶಿಷ್ಟಾಚಾರಗಳನ್ನು ವಿಶ್ಲೇಷಿಸಬೇಕಾಗುತ್ತದೆ.

ಬಂಧುತ್ವಕ್ಕೆ ಸಂಬಂಧಿಸಿದಂತೆ, ಎರಡು ಬಗೆಯ ಸಾಮಾನ್ಯ ವರ್ತನೆಗಳನ್ನು ನಾವು ಗುರುತಿಸಬಹುದು. ಇವುಗಳನ್ನು two sets of opposites – ವಿರೋಧಗಳ ಎರಡು ಗುಂಪಾಗಿದೆ.

          ಅ. ಗೌರವ v. ನಿಕಟತೆ (Respect v. Familiarity)
          ಆ. ಹಾಸ್ಯ v. ತಪ್ಪಿಸಿಕೊಳ್ಳುವಿಕೆ (Joking v. Avoidance)

ಗೌರವ ಸಂಬಂಧಿತ ವರ್ತನೆಯನ್ನು ಪೋಷಕರ ಬಗ್ಗೆ ಕಾಣುತ್ತೇವೆ. ಸೋದರ ಸಂಬಂಧಿಗಳ ನಡುವೆ ನಿಕಟತೆಯ ಸಂಬಂಧ ಕಂಡುಬರುತ್ತದೆ.

ಕೆಲವು ಬಂಧುಗಳ ನಡುವೆ ಮತ್ತು ತಮ್ಮ ವಂಶಕ್ಕೆ ಹೊರಗಿರುವಂತಹ ಸಂಬಂಧಿಗಳೊಡನೆ ವ್ಯಕ್ತವಾಗುವಂತಹ ವರ್ತನೆ – joking ಮತ್ತು avoidance; ಇದು ಗೌರವ ಹಾಗು ನಿಕಟತೆಯ ತೀವ್ರಸ್ವರೂಪಗಳೆಂದು ಹೇಳಬಹುದು. ಸಹೋದರ-ಸಹೋದರಿಯರ ಮಕ್ಕಳ ನಡುವಿನ ಸಂಬಂಧದಲ್ಲಿ ಹಾಸ್ಯಮಯತೆಯನ್ನು ನಾವು ಕಾಣಬಹುದು. Avoidance ಹಿಂದು-ಮುಂದಿನ ಪೀಳಿಗೆಯ ಸ್ತ್ರೀಪುರುಷರ ನಡುವೆ ಹಾಗು ಪತಿಯ ತಂದೆ –ಸೊಸೆ/ಪತ್ನಿಯ ತಾಯಿ-ಅಳಿಯನ ನಡುವೆ ಸಾಮಾನ್ಯವಾಗಿ ಕಾಣಬರುತ್ತದೆ.
ಆಸ್ತ್ರೇಲಿಯಾದ ಮೂಲನಿವಾಸಿಯೊಬ್ಬ ಬ್ರೌನ್ ಅವರಿಗೆ ಹೇಳಿದಂತೆ, ಅಳಿಯನಾದವನು ತನ್ನ ಅತ್ತೆಯೊಡನೆ ಅತಿ ಕಡಿಮೆ ಸಂಪರ್ಕ ಹೊಂದಿರುತ್ತಾನೆ; ಏಕೆಂದರೆ, ಪತ್ನಿಯ ತಾಯಿಯು ವ್ಯಕ್ತಿಯ ಅತ್ಯಂತ ನಿಕಟ ಸ್ನೇಹಿತೆ; ಆಕೆ ತನ್ನ ಮಗಳನ್ನು ಅವನಿಗೆ ಪತ್ನಿಯಾಗಿ ನೀಡುವಳು. 

ಜೋಕಿಂಗ್ ಸಂಬಂಧಗಳು ಕೂಡ ಇದೇ ಬಗೆಯದ್ದಾಗಿದೆ. ಅವು ಸೋದರಮಾವ ಮತ್ತು ಸೋದರಳಿಯನ ನಡುವಿರುವಂತಹ ಗೌರವವನ್ನು ಹಾಸ್ಯದ ಮೂಲಕ ವ್ಯಕ್ತ ಪಡಿಸುತ್ತದೆ. ಸಾಮಾಜಿಕ ರಚನೆಯಲ್ಲಿನ ಒಟ್ಟುಗೂಡಿಸುವ ಮತ್ತು ಬೇರ್ಪಡಿಸುವ ಅಂಶಗಳನ್ನು ಸಮತೋಲನಗೊಳಿಸುವಂತಹ ಸಾಧನವಾಗಿದೆ. ರಚನೆಯಲ್ಲಿನ ಆತಂಕ ಮತ್ತು ಒತ್ತಡಗಳನ್ನು ನಿರ್ವಹಿಸಲು ಇರುವಂತಹ ಸಾಂಸ್ಥಿಕ ಸಾಧನಗಳೆಂದು ಅರ್ಥಮಾಡಿಕೊಳ್ಳಬೇಕು.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಮಾಜಶಾಸ್ತ್ರ ಎಂದರೇನು?

ಸಾಮಾಜಿಕ ಗುಂಪುಗಳ ಅಧ್ಯಯನವೇ ಸಮಾಜಶಾಸ್ತ್ರ . ಗುಂಪುಗಳೆಂದರೆ ಜನರ ಸಮೂಹ. ಈ ಜನರು ಪರಸ್ಪರರೊಡನೆ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ತೊಡತುವರು. ಈ ಕ್ರಿಯೆ-ಪ್ರತಿಕ್ರಿಯೆಗಳ ಸಂಕೀರ್ಣಸ್ವರೂಪವೇ ಅಂತಃಕ್ರಿಯೆ. ಅತ್ಯಂತ ಸರಳವಾಗಿ ಹೇಳಬೇಕೆಂದರೆ, ಸಮಾಜಶಾಸ್ತ್ರವು ಜನರನ್ನು ಅಧ್ಯಯನ ಮಾಡುವ ಒಂದು ಅಧ್ಯಯನ. ಜನರು ನಿರ್ದಿಷ್ಟ ರೀತಿಯಲ್ಲಿ ಏಕೆ ನಡೆದುಕೊಳ್ಳುತ್ತಾರೆಂದು ತಿಳಿಯಲು ಸಮಾಜಶಾಸ್ತ್ರಜ್ಞರು ಬಯಸುತ್ತಾರೆ. ಅಲ್ಲದೇ, ಅವರು ಗುಂಪುಗಳನ್ನು ಏಕೆ ಸೇರುತ್ತಾರೆ, ರೂಪಿಸುತ್ತಾರೆ, ಯಾವ ಕಾರಣಕ್ಕಾಗಿ ಶಾಂತಿಪ್ರಿಯರಾಗಿರುತ್ತಾರೆ ಅಥವಾ ಯುದ್ಧಗಳನ್ನು ಮಾಡುತ್ತಾರೆ, ಏಕೆ ದೇವರ ಆರಾಧನೆ ಮಾಡುವರು, ವಿವಾಹವಾಗುವರು ಅಥವಾ ಮತದಾನ ಮಾಡುವರು, ಕ್ರೀಡೆಗಳೇಕೆ ರಾಷ್ತ್ರೀಯತೆಯನ್ನು ಉತ್ತೇಜಿಸುತ್ತದೆ, ತಮ್ಮ ಸಹವಾಸಿಗಳನ್ನೇಕೆ “ನಮ್ಮವರು-ತಮ್ಮವರು” ಎಂದು ವರ್ಗೀಕರಿಸುತ್ತಾರೆಂಬುದನ್ನು ತಿಳಿಯಲು ಉತ್ಸಾಹ ತೋರುತ್ತಾರೆ. ಜನರು ಪರಸ್ಪರ ಅಂತಃಕ್ರಿಯೆಯಲ್ಲಿ ತೊಡಗಿದಾಗ ಏನೆಲ್ಲ ಆಗುತ್ತದೆಂಬುದನ್ನು ಅರಿಯಲು ಬಯಸುತ್ತಾರೆ. ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳ, ಸಂಸ್ಥೆಗಳ ಮತ್ತು ಸಮುದಾಯದ ವೈಜ್ಞಾನಿಕ ಅಧ್ಯಯನ ಎನ್ನಬಹುದು. ಸಾಮಾಜಿಕ ಅಂತಃಕ್ರಿಯೆಯು ಗುಂಪುಗಳಲ್ಲಿ ಕಾಣಬರುವುದು. ಹಾಗಾಗಿ, ಸಮಾಜಶಾಸ್ತ್ರವು ಅಧ್ಯಯನ ಮಾಡುವ ವಿಷಯಗಳೆಂದರೆ: ೧. ಸಾಮಾಜಿಕ ಗುಂಪುಗಳ ಆಂತರಿಕ ಸ್ವರೂಪ ಸಂಘಟನೆಯ ವಿಧಾನಗಳು ೨. ಈ ಗುಂಪುಗಳ ಸಂಘಟನೆಯು ಯಾವ ...